ಹತ್ತು ವರ್ಷದ ಬಳಿಕ ಮಾಧ್ಯಮ ಸಂದರ್ಶನ ನೀಡಿದ ವಿಜಯ

ನಟ ವಿಜಯ್ ದೇಶದ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರು. ತಮ್ಮನ್ನು ಪ್ರೀತಿಸುವ ಅಭಿಮಾನಿಗಳ ಕೈಗೆ ಆಗಾಗ್ಗೆ ಸಿಗುವ ವಿಜಯ್, ಮಾಧ್ಯಮಗಳಿಂದ ಸದಾ ದೂರ. ಅವರೊಂದು ಟಿವಿ ಸಂದರ್ಶನ ನೀಡಿ ಹತ್ತು ವರ್ಷವಾಗಿತ್ತು. ಈಗ ಹತ್ತು ವರ್ಷದ ಬಳಿಕ ಸಂದರ್ಶನ ನೀಡಿದ್ದಾರೆ ವಿಜಯ್. ವಿಜಯ್ ನಟನೆಯ ಬೀಸ್ಟ್‌ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದ್ದು, ಸಿನಿಮಾದ ಪಚಾರಾರ್ಥ ನಟ ವಿಜಯ್ ಸನ್ ಟಿವಿಗೆ ಸಂದರ್ಶನ ನೀಡಿದ್ದಾರೆ. ವಿಜಯ್‌ರ ಸಂದರ್ಶನ ಪಡೆದುಕೊಂಡಿದ್ದು ಬೀಸ್ಟ್‌ ಸಿನಿಮಾದ ನಿರ್ದೇಶಕ ನೆಲ್ಸನ್. ಈ ಸಂದರ್ಶನದಲ್ಲಿ ನಟ ವಿಜಯ್ ಕೇವಲ ಸಿನಿಮಾ ಬಗ್ಗೆ ಮಾತ್ರವೇ ಅಲ್ಲದೆ, ರಾಜಕೀಯ, ಒಟ್ಟಾರೆ ಚಿತ್ರರಂಗ, ಕುಟುಂಬ, ಮಗನೊಂದಿಗೆ ತಮ್ಮ ಸಂಬಂಧ, ಅಧ್ಯಾತ್ಮಿಕತೆ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ವಿಜಯ್‌ರ ಸಂದರ್ಶನ ಪ್ರಸಾರವಾಗಲಿದೆ ಎಂದಾಗಲೇ ರಾಜಕೀಯ ಪ್ರವೇಶದ ಬಗ್ಗೆ ವಿಜಯ್ ಏನು ಹೇಳಲಿದ್ದಾರೆ ಎಂಬುದು ಕುತೂಹಲ ಕೆರಳಿಸಿತ್ತು. ಈವರೆಗೆ ಯಾವ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡದಿದ್ದರೂ ಸಹ ತಮಿಳುನಾಡು ರಾಜ್ಯ ರಾಜಕೀಯದ ಮೇಲೆ ವಿಜಯ್ ಪ್ರಭಾವ ಬೀರುತ್ತಿದ್ದಾರೆ.
ವಿಜಯ್‌ರ ತಂದೆ ವಿಜಯ್‌ಗಿರುವ ಅತ್ಯದ್ಭುತ ಅಭಿಮಾನಿ ಬಳಗ, ಫ್ಯಾನ್ ಫಾಲೋವಿಂಗ್ ಅನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ವಿಜಯ್‌ರ ತಂದೆ ಮಗನ ಹೆಸರಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಆದರೆ ತಾವು ಆ ಪಕ್ಷದೊಟ್ಟಿಗೆ ಸಂಬಂಧ ಇಟ್ಟುಕೊಂಡಿಲ್ಲ ಎಂದು ವಿಜಯ್ ಬಹಿರಂಗವಾಗಿ ಹೇಳಿಕೆ ಬಿಡುಗಡೆ ಮಾಡಿದರು. ಆ ಬಳಿಕ ಕಳೆದ ವರ್ಷ ನಡೆದ ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಜಯ್ ಅಭಿಮಾನಿಗಳ ಒತ್ತಾಯದ ಮೇರೆಗೆ ವಿಜಯ್‌ರ ತಮ್ಮ ಚಿತ್ರಗಳನ್ನು ಬಳಸಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದ್ದರು. ಅಂತೆಯೇ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧಿಸಿದ್ದ ಹಲವು ಮಂದಿ ವಿಜಯ್ ಅಭಿಮಾನಿಗಳು ಗೆಲುವು ಸಾಧಿಸಿದ್ದರು. ಇದು ರಾಜ್ಯದ ಇತರೆ ಪಕ್ಷಗಳಿಗೆ ಆಶ್ಚರ್ಯ ಜೊತೆಗೆ ಆತಂಕ ತಂದಿತ್ತು. ಈಗ ಸ್ವತಃ ವಿಜಯ್ ರಾಜಕೀಯ ಪ್ರವೇಶದ ಬಗ್ಗೆ ತಮ್ಮ ನಿಲವೇನು ಎಂಬುದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸಂದರ್ಶನದಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿರುವ ವಿಜಯ್, ಅಭಿಮಾನಿಗಳು ಬಯಸಿದಲ್ಲಿ ರಾಜಕೀಯಕ್ಕೆ ಪ್ರವೇಶಿಸುತ್ತೇನೆ ಎಂದಿದ್ದಾರೆ. ಅಸಲಿಗೆ ಅಭಿಮಾನಿಗಳು ಹಲವು ವರ್ಷಗಳಿಂದಲೂ ವಿಜಯ್ ರಾಜಕೀಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸುತ್ತಲೇ ಇದ್ದಾರೆ. ಅಲ್ಲಿಗೆ ವಿಜಯ್ ರಾಜಕೀಯ ಪ್ರವೇಶ ಎನ್ನುವುದು ಬಹುತೇಕ ಖಾತ್ರಿಯೇ ಆದಂತಾಗಿದೆ.
ಇದು ಮಾತ್ರವೇ ಅಲ್ಲದೆ, ಕಳೆದ ವರ್ಷದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿಜಯ್, ಸೈಕಲ್‌ನಲ್ಲಿ ಬಂದು ಮತ ಚಲಾಯಿಸಿದ್ದರು, ಪೆಟ್ರೋಲ್ ದರ ಏರಿಕೆ ವಿರುದ್ಧ ವಿಜಯ್ ಮಾಡಿದ ಪ್ರತಿಭಟನೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆಯೂ ಉತ್ತರಿಸಿದ ವಿಜಯ್, ಮತಗಟ್ಟೆ ನನ್ನ ಮನೆಯ ಹಿಂದಿನ ರಸ್ತೆಯಲ್ಲಿಯೇ ಇತ್ತು ಹಾಗಾಗಿ ಸೈಕಲ್‌ನಲ್ಲಿ ಹೋದೆ, ಬೇರೆ ಉದ್ದೇಶ ಇರಲಿಲ್ಲ ಎಂದಿದ್ದಾರೆ.

The Daily News Media

The Daily News Media