ಪ್ರಾಚೀನ ಭಾಷೆ ಕನ್ನಡವನ್ನು ಬೆಳೆಸುವ ಹೊಣೆ

ದಿ ಡೈಲಿನ್ಯೂಸ್ ಚಿತ್ತಾಪುರ
ಕನ್ನಡ ಭಾಷೆಯು ಅತ್ಯಂತ ಪ್ರಾಚೀನ ಶ್ರೀಮಂತ ಭಾಷೆಯಾಗಿದ್ದು ಇದನ್ನು ಇನ್ನೂ ಎತ್ತರಕ್ಕೆ ಬೆಳೆಸುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ಕಸಾಪ ತಾಲೂಕು ಘಟಕದ ಸಾಹಿತ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಸರ್ವಸದಸ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿಜಯನಗರ ಚಾಲುಕ್ಯರು ರಾಷ್ಟ್ರಕೂಟರು ಈ ನಾಡಿನಲ್ಲಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಭಾಷೆಯ ಬೆಳವಣಿಗೆಗೆ ಪರಿಷತ್ತು ನಿರಂತರ ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಕನ್ನಡ ಬೇರುಮಟ್ಟದಿಂದಲೇ ಬೆಳೆಯಬೇಕು. ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಬೇಕಾಗುವ ಅನುದಾನವನ್ನು ಕೂಡ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೇಂದ್ರ ಗೃಹ ಸಚಿವರ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ ಅವರು ಹಿಂದಿ ಹಾಗೂ ಇಂಗ್ಲೀಷ್ ಬಳಸಿದಾಗ ಕನ್ನಡಭಾಷೆಗೆ ತೊಂದರೆಯಾಗುತ್ತದೆ. ನನಗೆ ನಮ್ಮ ಭಾಷೆ ಶ್ರೇಷ್ಠ, ಬೇರೆಯವರ ಭಾಷೆಯ ಬಗ್ಗೆ ನಾನ್ಯಾಕೇ ತೆಲೆಕೆಡಿಸಿಕೊಳ್ಳಲಿ ಹಿಂದಿ ಹೇರಿಕೆ ವಿರೋಧಿಸಬೇಕಿದ್ದರೆ ಕನ್ನಡವನ್ನು ಬೇರುಮಟ್ಟದಿಂದ ಬೆಳೆಸಿ, ಬಳಸಿ, ಉಳಿಸಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಾಲೂಕು ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ ಅವರಿಗೆ ಕನ್ನಡ ದ್ವಜ ಹಸ್ತಾಂತರ ಮಾಡಿ ಮಾತನಾಡಿ, ಐದು ವರ್ಷಗಳ ತಮ್ಮ ಅವಧಿಯಲ್ಲಿ ಕನ್ನಡದ ಕೆಲಸ ಮಾಡಿಕೊಂಡು ಹೋಗುವುದಾಗಿ ಹೇಳಿದರು. ಮುಂಬರುವ ದಿನಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಿತ್ತಾಪುರ ಪಟ್ಟಣದಲ್ಲಿ ನಡೆಸುವುದಾಗಿ ಭರವಸೆ ನೀಡಿದರು.

ತಾಲೂಕಿನ ಕಸಾಪ ಆಜೀವ ಸದಸ್ಯರಿಗೆ ಸನ್ಮಾನಿಸಿ ಅಭಿನಂದಿಸಿಲಾಯಿತು. ತಾಲೂಕು ಕಸಾಪ ಪದಾಧಿಕಾರಿಗಳಿಗೆ ನೇಮಕ ಪತ್ರ ನೀಡಿ ಗೌರವಿಸಲಾಯಿತು. ರಾಜ್ಯ ತೊಗರಿಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಭಾಸರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರ, ಮಾಜಿ ಅಧ್ಯಕ್ಷ ವೀರಣ್ಣಗೌಡ ಪರಸರೆಡ್ಡಿ, ತಹಸೀಲ್ದಾರ್ ಉಮಾಕಾಂತ್ ಹಳ್ಳೆ ಮತ್ತಿತರರಿದ್ದರು.

 

 

The Daily News Media

The Daily News Media