ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಹಕಾರ

ದಿ ಡೈಲಿ ನ್ಯೂಸ್ ಧಾರವಾಡ
ಸಾಂಸ್ಕೃತಿಕ, ವಿದ್ಯೆ ಹಾಗೂ ವಾಣಿಜ್ಯಕ್ಕೆ ಹೆಸರಾಗಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸದಭಿರುಚಿಯ ಚಲನಚಿತ್ರಗಳ ಪ್ರದರ್ಶನಕ್ಕೆ ಸುಚಿತ್ರಾ ಹಾಗೂ ಚಿತ್ರಾ ಫಿಲ್ಮ್‌ ಸೊಸೈಟಿಗಳು ಜಂಟಿಯಾಗಿ ಆಯೋಜಿಸಲು ಬಯಸಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಎಲ್ಲ ಅಗತ್ಯ ನೆರವು ಒದಗಿಸಲಾಗುವುದು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಇಲ್ಲಿನ ಸೃಜನಾ ರಂಗಮಂದಿರಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕುರಿತ ಸಭೆಯನ್ನುದ್ದೇಶಿಸಿ ಮಾತನಾಡಿ,
ಸುಚಿತ್ರಾ ಹಾಗೂ ಚಿತ್ರಾ ಎರಡೂ ಫಿಲ್ಮ್‌ ಸೊಸೈಟಿಗಳಿಗೆ 50 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅರ್ಥಪೂರ್ಣವಾದ ಚಿತ್ರೋತ್ಸವ ಆಯೋಜನೆಗೆ ಸ್ಥಳೀಯ ಸಂಘ, ಸಂಸ್ಥೆ, ಉದ್ಯಮಗಳು ಹಾಗೂ ಆಡಳಿತದಿಂದ ಅಗತ್ಯ ನೆರವು, ಸಹಕಾರ ಕಲ್ಪಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸುವುದು ಸೂಕ್ತ ಎಂದರು.
ಚಲನಚಿತ್ರ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಮಾತನಾಡಿ, ಸಿನಿಮಾ ಸಂಸ್ಕೃತಿ ಬೆಳೆಸುವ ಮೂಲಕ ವಿಪುಲ ಅವಕಾಶ ಹಾಗೂ ಸಾಧ್ಯತೆಗಳನ್ನು ಸೃಷ್ಟಿಸಬಹುದು. ಸ್ಥಳೀಯ ಉದ್ಯಮಿ, ವ್ಯಾಪಾರಿಗಳು, ಕೈಗಾರಿಕೆಗಳ ಮೂಲಕ ಸಂಪನ್ಮೂಲಗಳ ಕ್ರೂಢೀಕರಣ ಮಾಡಿ, ಸರ್ಕಾರದ ಒಂದು ಸಣ್ಣ ಪಾಲಿನ ಅನುದಾನ ಪಡೆದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸುವ ಉದ್ದೇಶವಿದೆ. ಸದಭಿರುಚಿಯ ಎಲ್ಲಾ ಚಿತ್ರಗಳು ಓಟಿಟಿ ವೇದಿಕೆಯಲ್ಲಿ ಸಿಗುವುದಿಲ್ಲ. ಸಾಮೂಹಿಕವಾಗಿ ಒಟ್ಟಾಗಿ ಸಿನಿಮಾ ವೀಕ್ಷಿಸುವ ಅನುಭವಕ್ಕೂ, ಪ್ರತ್ಯೇಕವಾಗಿ ಒಬ್ಬರೇ ನೋಡುವುದಕ್ಕೂ ವ್ಯತ್ಯಾಸವಿದೆ. ಚಲನಚಿತ್ರೋತ್ಸವದ ಮೂಲಕ ಫಿಲ್ಮ್‌ ಕೋರ್ಸ್‌ಗಳನ್ನು ಜನಪ್ರಿಯಗೊಳಿಸಿ, ಉದ್ಯೋಗ ಸೃಜನೆಗೆ ಅವಕಾಶವಿದೆ ಎಂದರು.
ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಮಾತನಾಡಿ, ವಿಮಾನ, ರೈಲ್ವೆ, ಬಸ್ ಮತ್ತಿತರ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿರುವ ಹುಬ್ಬಳ್ಳಿ-ಧಾರವಾಡದಲ್ಲಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿ ಸಮೂಹವಿದೆ. ಒಂದೇ ಕಡೆ ಅನೇಕ ಚಲನಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗುವ ಉತ್ಸವ, ಗೋಷ್ಠಿಗಳನ್ನು ಹಮ್ಮಿಕೊಳ್ಳಬಹುದು. ಸರ್ಕಾರದಿಂದಲೂ ನೆರವು ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಬಿ. ಗೋಪಾಲಕೃಷ್ಣ ಮಾತನಾಡಿ, ಕೋವಿಡ್ ನಂತರದ ದಿನಗಳಲ್ಲಿ ಜನರಿಗೆ ಸದಭಿರುಚಿಯ ಸಾಂಸ್ಕೃತಿಕ ಚಟುವಟಿಕೆಗಳನ್ನು ನೀಡುವ ಅಗತ್ಯವಿದೆ ಎಂದರು.
ರಂಗಾಯಣ ನಿರ್ದೇಶಕ ರಮೇಶ್ ಪರವಿನಾಯ್ಕರ್ , ರಂಗಕರ್ಮಿ ಪ್ರಕಾಶ ಗರೂಡ, ಚಿತ್ರ ಫಿಲ್ಮ್‌ ಸೊಸೈಟಿಯ ಎ.ಎಂ. ಖಾನ್, ಶ್ರೀನಿವಾಸ ಶಾಸ್ತ್ರಿ, ಆನಂದ ವರ್ಧನ್, ವಿಶಾಖ ಅಭಿಷೇಕ ಅಯ್ಯಂಗಾರ, ಸಮೀರ್ ಜೋಷಿ, ಅರುಣ ಕರಡಿ ಸೇರಿದಂತೆ ಅನೇಕರು ಸಲಹೆ ಸೂಚನೆಗಳನ್ನು ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ನಿರೂಪಿಸಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ವಂದಿಸಿದರು.

 

The Daily News Media

The Daily News Media