ಅನುದಾನ ಸಮರ್ಪಕ ಬಳಕೆಯಾಗಲಿ

ದಿ ಡೈಲಿ ನ್ಯೂಸ್ ಹುಣಸಗಿ
ಮುದನೂರು ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಗೆ ಸರಕಾರ ಒತ್ತು ನೀಡಬೇಕು. ಅಲ್ಲದೆ ಈ ಹಿಂದೇ ನೀಡಿದ 6 ಕೋಟಿ ಅನುದಾನದಲ್ಲಿ ಕೇವಲ 3 ಕೋಟಿ ಮಾತ್ರ ಹಾಗೇ ಉಳದಿದ್ದು ಅಭಿವೃದ್ಧಿಗೆ ಸಮರ್ಪಕ ಬಳಕೆ ಮಾಡಬೇಕು ಎಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ ಹೇಳಿದರು.
ತಾಲೂಕಿನ ಮುದನೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುದನೂರು ಗ್ರಾಮವು ರಾಜ್ಯ ನೇಕಾರ ಸಮುದಾಯಗಳ ಶ್ರದ್ಧಾ ಭಕ್ತಿಯ ಕೇಂದ್ರ ಸ್ಥಳವಾಗಿದೆ. ಸಮಾಜದ ಹಿತ ಚಿಂತನೆಗಾಗಿ ನೇಕಾರ ಸಮಾಜದ 7 ಪಿಠಾಧೀಪತಿಗಳನ್ನು ಒಳಗೊಂಡಂತೆ ಒಂದು ಗುರುಪೀಠವನ್ನು ಮಾಡುವ ಕುರಿತು ಚಿಂತನೆ ನಡೆಸಲಾಗಿದೆ. ಕ್ಷೇತ್ರ ಅಭಿವೃದ್ಧಿಗೆ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮುದನೂರು ಕ್ಷೇತ್ರಕ್ಕೆ 5 ಎಕರೆ ಸ್ಥಳವನ್ನು ಒಕ್ಕೂಟಕ್ಕೆ ನೀಡಿದಲ್ಲಿ ಆ ಸ್ಥಳದಲ್ಲಿ ಬಡಮಕ್ಕಳಿಗೆ ಶಿಕ್ಷಣ ಮತ್ತು ಯಾತ್ರಾರ್ಥಿಗಳಿಗೆ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಲಾಗುತ್ತಿದೆ. ಅಲ್ಲದೇ ನೇಕಾರ ಸಮಾಜ ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಇದೆ. ವಿದ್ಯಾವಂತರು ಕಡಿಮೆ ಇದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಡ ಮಕ್ಕಳಿಗೆ ನೇಕಾರರ ಸಮುದಾಯಗಳ ಒಕ್ಕೂಟದ ವತಿಯಿಂದ ಉಚಿತವಾಗಿ ಐಎಎಸ್, ಐಪಿಎಸ್ ತರಬೇತಿ ಶಿಕ್ಷಣ ಕಲ್ಪಿಸಲಾಗುವುದು ಎಂದರು.
ಒಕ್ಕೂಟದ ಪ್ರಮುಖರಾದ ಡಿ.ಟಿ.ಚಂದ್ರಶೇಖರ ಮಾತನಾಡಿ, ಕ್ಷೇತ್ರದಲ್ಲಿ ಕಳೆದ ಏಳೆಂಟು ವರ್ಷಗಳ ಹಿಂದೆಯೇ ದೇವರ ದಾಸಿಮಯ್ಯ ಸ್ಮಾರಕ ಭವನ ನಿರ್ಮಿಸಲಾಗುತ್ತಿದ್ದು, ಅದು ಪೂರ್ಣಗೊಳ್ಳದೆ ಅಪೂರ್ಣಗೊಂಡಿದೆ. ಪೂರ್ಣಗೊಳಿಸಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು, ಯಾತ್ರಾರ್ಥಿಗಳಿಗೆ ಸಾರಿಗೆ ಸೌಕರ್ಯ ಜತೆಗೆ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎ.ನಂಜುಂಡಸ್ವಾಮಿ, ನವೀನ್ ಚಿಲ್ಲಾಳ, ತೋಟಪ್ಪ ಶೇಖಾ, ಜಿ.ನಾಗರಾಜು, ಶಿವಪ್ಪ ಶೆಟ್ಟಿ, ರಾಮಸ್ವಾಮಿ ಸೇರಿದಂತೆ ಇತರರಿದ್ದರು.

The Daily News Media

The Daily News Media