ಸ್ಮಾರಕಗಳ ಸಂರಕ್ಷಣೆಗೆ ಕ್ರಮ

ದಿ ಡೈಲಿ ನ್ಯೂಸ್ ವಿಜಯಪುರ
ನಗರದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಗತಕಾಲದ ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಸಮರ್ಪಕ ನಿರ್ವಹಣೆಗೆ ಕಸ-ತ್ಯಾಜ್ಯ ವಿಲೇವಾರಿ ಮಾಡುವ ಜೊತೆಗೆ ಪರಿಸರ ಸ್ವಚ್ಛತೆಯೂ ಬಹಳ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕಚೇರಿಯ ಸಮೀಪದ ಕರೀಮುದ್ದಿನ್ ಮಸೀದಿ, ಕೋಟೆ ಗೋಡೆ ಆವರಣ ಹಾಗೂ ಇತರೆ ಸ್ಮಾರಕಗಳಲ್ಲಿ ವಿಜಯಪುರ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಸ್ವಚ್ಛತಾ ಕಾರ್ಯಕ್ರಮ ಹಾಗೂ ಹೆರಿಟೇಜ್ ವಾಕ್‌ನಲ್ಲಿ ಅವರು ಮಾತನಾಡಿ, ಸ್ಮಾರಕಗಳು ನಗರದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಕೋಟೆಗೋಡೆಗಳ ಸುತ್ತಮುತ್ತ ಬೆಳೆದು ನಿಂತಿರುವ ಮುಳ್ಳಿನ ಗಿಡಗಂಟೆಗಳನ್ನು ತೆಗೆದುಹಾಕಿ, ಆವರಣದ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಇದು ಬಹಳ ಅಗತ್ಯವಾಗಿದೆ. ಈ ಕಾರ್ಯವನ್ನು ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.
ಗಗನ್ ಮಹಲ್ ಹಾಗೂ ಕರೀಮುದ್ದಿನ್ ಮಸೀದಿ ಬಳಿಯ ರಸ್ತೆಯನ್ನು ಮುಂಜಾನೆ ಹೊತ್ತು ವಾಹನಗಳ ದಟ್ಟಣೆ ತಪ್ಪಿಸಿ, ಟ್ರಾಫಿಕ್ ಮುಕ್ತಗೊಳಿಸಿ, ಜನರಿಗೆ ವಾಕಿಂಗ್ ಮಾಡಲು ಅನುಕೂಲ ಮಾಡಿಕೊಡಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ಕೊಟ್ಟರು.
ನಗರವ್ಯಾಪ್ತಿಯಲ್ಲಿ ಸ್ವಚ್ಛತೆಯು ಒಂದು ಸವಾಲಾಗಿದೆ. ಆದರೆ ಅದನ್ನು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಸಮರ್ಪಕವಾಗಿ ನಿರ್ವಹಿಸಲಾಗುವುದು. ಅಲ್ಲದೇ ಸ್ಮಾರಕಗಳ ಸಂರಕ್ಷಣೆಗೆ ಸುತ್ತಲೂ ಸ್ಚಚ್ಛತಾ ಕಾರ್ಯ ನಡಸಿ ಯಾವುದಕ್ಕೂ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ರೂಪದಲ್ಲಿ ನಿಧಿಸಂಗ್ರಹಿಸಿ, ಅದನ್ನು ಈ ಕಾರ್ಯಕ್ಕೆ ವಿನಿಯೋಗಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾಡಳಿತ ಕೈಗೊಂಡಿರುವ ಈ ವಿನೂತನ ಕಾರ್ಯಕ್ಕೆ ಸಾರ್ವಜನಿಕರ ಸಹಕಾರವೂ ಬಹಳ ಅಗತ್ಯವಾಗಿದೆ. ಅಂತೆಯೇ ಸ್ವಚ್ಛ ಸರ್ವೇಕ್ಷಣಾ ಸರ್ವೆಯಲ್ಲಿ ನಗರದ ಜನರು ಪಾಲ್ಗೊಂಡು ಓಟಿಂಗ್ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಮಲೋಚಕ ಅನಿಲಕುಮಾರ್ ಬಣಜಿಗೇರ್, ಅಮೀನ್ ಹುಲ್ಲೂರ್, ಉಪಆಯುಕ್ತ ಮಹಾವೀರ ಬೊರನ್ನವರ್ ಇತರರು ಹಾಜರಿದ್ದರು.

 

The Daily News Media

The Daily News Media