ಕೃಷಿಕರ ಖುಷಿ ಹೆಚ್ಚಿಸಿದ ಉದ್ಯೋಗ ಖಾತ್ರಿ

ಮಾರುತಿ ಸೋನಾರ್ ಬೀದರ್
ಡಿಜಿಟಲ್ ಗ್ರಂಥಾಲಯದ ಮೂಲಕ ಸುದ್ದಿಯ ಕೇಂದ್ರವಾಗಿರುವ ಔರಾದ್ ತಾಲೂಕಿನ ಗುಡಪಳ್ಳಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ರೈತರಿಗೆ ವರದಾನವಾಗುವ ರೀತಿ ಬಳಸಿಕೊಳ್ಳಲಾಗಿದೆ.
ರೈತರ ಆದಾಯ ಹೆಚ್ಚಿಸಲು ನೆರವಾಗುವಂತೆ ತೆರೆದ ಬಾವಿ ತೋಡಲಾಗಿದೆ. ಕೃಷಿ ಜಮೀನಿನಲ್ಲಿದ್ದ ಕಲ್ಲುಗಳನ್ನು ಆಯ್ದು ಹಾಕಲಾಗಿದೆ. ನಾಲಾ ಪಿಚ್ಚಿಂಗ್, ನಾಲಾ ಟರ್ನಿಂಗ್ ಕಾಮಗಾರಿಗಳನ್ನೂ ಕೈಗೊಳ್ಳಲಾಗಿದೆ.
ಉದ್ಯೋಗ ಖಾತ್ರಿ ಯೋಜನೆಯನ್ನು ಹೀಗೆ ಹೊಸ ರೀತಿಯಲ್ಲಿ ಬಳಸಿಕೊಂಡವರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ್. ಸಣ್ಣ ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭಿಸಿ, ಇಲಾಖೆಯ ಅಧಿಕಾರಿಗಳ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿರುವ ಸಂತೋಷ ಪಾಟೀಲ್ ಕೃಷಿಕರ ಖುಷಿ ಹೆಚ್ಚಿಸುವ ಕೆಲಸವನ್ನೂ ಮಾಡಿದ್ದಾರೆ.
ಕಾಮಗಾರಿಗಳ ವಿವರ: ಗುಡಪಳ್ಳಿ ಗ್ರಾಮದಲ್ಲಿ ೧೮ ತೆರೆದ ಬಾವಿಗಳನ್ನು ತೋಡಲಾಗಿದೆ. ಪ್ರತಿಯೊಂದಕ್ಕೆ ಗರಿಷ್ಠ ೧.೨೮ ಲಕ್ಷ ರೂ.ವೆಚ್ಚ ಮಾಡಲಾಗಿದೆ. ೭೭ ರೈತರ ಹೊಲಗಳಲ್ಲಿನ ಕಲ್ಲುಗಳನ್ನು ಆಯ್ದು, ಹೊಲ ಸ್ವಚ್ಛಗೊಳಿಸಲಾಗಿದೆ. ೩೬ ಕೊಟ್ಟಿಗೆ ನಿರ್ಮಿಸಲಾಗಿದೆ. ೯ ಹೊಲದ ರಸ್ತೆಗಳನ್ನು, ೪ ಸಿಸಿ ರಸ್ತೆಗಳನ್ನು, ಚರಂಡಿಗಳನ್ನೂ ನಿರ್ಮಿಸಲಾಗಿದೆ. ೧೬ ನಾಲಾ ಪಿಚ್ಚಿಂಗ್ ಕಾಮಗಾರಿ ಕೈಗೊಳ್ಳಲಾಗಿದ್ದು, ಪ್ರತಿಯೊಂದಕ್ಕೆ ಅಂದಾಜು ೨ ಲಕ್ಷ ವೆಚ್ಚವಾಗಿದೆ. ೧೯ ನಾಲಾ ಟರ್ನಿಂಗ್ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಗ್ರಾಮದ ಸುತ್ತಲಿನ ನಾಲೆಗಳಲ್ಲಿನ ಹೂಳು ತೆಗೆಯಲಾಗಿದೆ. ದಡಗಳನ್ನು ಭದ್ರಪಡಿಸಲಾಗಿದೆ. ನಾಲೆಗಳ ನೀರು ರೈತರ ಹೊಲಕ್ಕೆ ನುಗ್ಗುವುದನ್ನು ತಡೆಯಲು ಕಲ್ಲುಗಳಿಂದ ದಡಗಳನ್ನು ಭದ್ರಪಡಿಸಲಾಗಿದೆ.
ಈ ವರ್ಷ ಇನ್ನಷ್ಟು ರೈತರಿಗೆ ಅನುಕೂಲ ಮಾಡಿಕೊಡುವ ಕಾಮಗಾರಿ ಕೈಗೊಳ್ಳಲಾಗುತ್ತದೆ. ತೆರೆದ ಬಾವಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ. ಇದರಿಂದ ರೈತರು ನೀರಾವರಿ ಬೇಸಾಯ ಕೈಗೊಂಡು ಅಧಿಕ ಆದಾಯ ಪಡೆಯಬಹುದು ಎನ್ನುತ್ತಾರೆ ಪಿಡಿಒ ಸಂತೋಷ ಪಾಟೀಲ್.

The Daily News Media

The Daily News Media