ಶೀಘ್ರದಲ್ಲಿ ಗುಡ್ ನ್ಯೂಸ್ ಕೊಡಲಿದ್ದಾರೆ ನಯನತಾರಾ

ಕಾಲಿವುಡ್ ಕ್ಯೂಟ್ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಕಳೆದ 6 ವರ್ಷಗಳಿಂದ ರಿಲೇಶನ್ ಶಿಪ್‌ನಲ್ಲಿದ್ದು, ಇಬ್ಬರು ತಮ್ಮ ಗುರಿ ಸಾಧಿಸುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 2015ರ ರೌಡಿ ಧಾನ್ ಚಿತ್ರೀಕರಣದ ವೇಳೆ ಪ್ರೀತಿಯಲ್ಲಿ ಬಿದ್ದಿದ್ದ ಈ ಜೋಡಿ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಷ್ಟು ದಿನ ನಯನತಾರಾ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಮುಂದಿನ ಎಕೆ 69 ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುವ ಮುನ್ನ ನಯನತಾರಾ ಅವರನ್ನು ವರಿಸಲಿದ್ದಾರೆ ಎಂಬ ಸುದ್ದಿಯೊಂದು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.  ಎಕೆ 69 ಸಿನಿಮಾ ಕಾಲಿವುಡ್ ನಟ ತಲಾ ಅಜಿತ್ ಅಭಿನಯಿಸುತ್ತಿರುವ 62ನೇ ಪ್ರಾಜೆಕ್ಟ್‌ ಇದಾಗಿದ್ದು, ಈ ಸಿನಿಮಾ ಇದೇ ವರ್ಷದ ಅಂತ್ಯದ ವೇಳೆಗೆ ಸೆಟ್ಟೇರುವ ನಿರೀಕ್ಷೆ ಇದೆ. ಈ ಸಿನಿಮಾದ ಶೂಟಿಂಗ್‌ನಲ್ಲಿ ವಿಘ್ನೇಶ್ ಶಿವನ್ ಬ್ಯುಸಿಯಾಗುವ ಮುನ್ನವೇ ನಯನತಾರಾ ಅವರನ್ನು ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದ್ದು, ಈ ವಿಚಾರವಾಗಿ ಶೀಘ್ರದಲ್ಲಿಯೇ ಈ ಜೋಡಿ ಅಧಿಕೃತವಾಗಿ ಅನೌನ್ಸ್‌ ಮಾಡುವ ನಿರೀಕ್ಷೆಯಿದೆ. ಅಲ್ಲದೇ ಈ ವರ್ಷದ ಜೂನ್ ಹೊತ್ತಿಗೆ ವಿಘ್ನೇಶ್ ನಯನತಾರಾ ಕೈ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

The Daily News Media

The Daily News Media