ಗುಣಮಟ್ಟದ ಹಾಲು ಪೂರೈಕೆಯಿಂದ ಪ್ರಗತಿ

ದಿ ಡೈಲಿ ನ್ಯೂಸ್ ಪಾಂಡವಪುರ
ರೈತರು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಿ ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರ ತಿಳಿಸಿದ್ದಾರೆ.
ಪಟ್ಟಣದ ಮನ್‌ಮುಲ್ ಉಪಕಚೇರಿಯಲ್ಲಿ ನಡೆದ ರೈತಕಲ್ಯಾಣ ಟ್ರಸ್ಟ್ ಹಾಗೂ ರಾಸುಗಳ ವಿಮಾ ಪರಿಹಾರದ ಚೆಕ್ ಹಾಗೂ ಬಿಎಂಸಿ ಕೇಂದ್ರಗಳಿಗೆ ಸೋಲಾರ್ ಅಳವಡಿಕೆಗೆ ಸಹಾಯ ಧನದ ಚೆಕ್ ವಿತರಣೆ ಮಾಡಿದ ಬಳಿಕ ಮಾತನಾಡಿ, ಹೈನುಗಾರಿಕೆ ನೆಚ್ಚಿಕೊಂಡು ಸಾಕಷ್ಟು ಕುಟುಂಬಗಳು ಬದುಕು ಸಾಗಿಸುತ್ತಿವೆ. ಕೊರೊನಾ ಸಂದರ್ಭದಲ್ಲಿ ಹಾಲಿನ ದರ ಕಡಿಮೆಯಾಗಿತ್ತು. ಇದೀಗ ಮತ್ತೆ ರೂ.೨ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಹಾಲಿನ ದರ ಹೆಚ್ಚಾಗಲಿದೆ ಎಂದು ತಿಳಿಸಿದರು.
ಕೆಎಂಎಫ್ ವತಿಯಿಂದ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪಿಸಿ ಆ ಮೂಲಕ ಒಕ್ಕೂಟದ ಎಲ್ಲಾ ವ್ಯವಹಾರಗಳನ್ನು ನಡೆಸಬೇಕು ಎಂದರು.
ಉಪವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ರೈತರು ವೈಜ್ಞಾನಿಕವಾಗಿ ಹಸು ಸಾಕಣೆ ಮಾಡುವುದನ್ನು ಕಲಿಯಬೇಕು. ಪಶು ಆಹಾರವನ್ನು ಸರಿಯಾಗಿ ನೀಡಬೇಕು. ಜತೆಗೆ ತಾಲೂಕಿನಲ್ಲಿ ಹಾಲಿನ ಗುಣಮಟ್ಟ ಶೇ.೪.೧ ರಿಂದ ೩.೯ಕ್ಕೆ ಕುಸಿದು ೫ನೇ ಸ್ಥಾನಕ್ಕೆ ಇಳಿದಿದೆ. ಇದು ಸರಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಅಕಾಲಿಕವಾಗಿ ಮರಣಹೊಂದಿದ ರಾಸುಗಳ ಮಾಲೀಕರಿಗೆ ವಿಮಾ ಸೌಲಭ್ಯದ ಚೆಕ್ ವಿತರಣೆ, ಅಕಾಲಿಕ ಮರಣ ಹೊಂದಿದ ಷೇರುದಾರ ಕುಟುಂಬದ ಸದಸ್ಯರಿಗೆ ರೈತ ಕಲ್ಯಾಣ ಟ್ರಸ್ಟ್‌ನಿಂದ ತಲಾ ೧೦ ಸಾವಿರ ಪರಿಹಾರದ ಚೆಕ್ ವಿತರಿಸಲಾಯಿತು.
ಮಾರ್ಗ ವಿಸ್ತರಣಾಧಿಕಾರಿಗಳಾದ ಸಿದ್ದರಾಜು, ಮಂಜುನಾಥ್, ಉಷಾ ಮತ್ತಿತರರು ಇದ್ದರು.

 

The Daily News Media

The Daily News Media